“ಲಂಚದ ದಾಹಕ್ಕೆ ಖಾಕಿ ಬಲಿ – ಫೋನ್‌ಪೇ ಟ್ರಾನ್ಸಾಕ್ಷನ್‌ನಿಂದಲೇ ಲೋಕಾಯುಕ್ತ ಬಲೆಗೆ ಬಿದ್ದ PSI!”
ಕಲಬುರಗಿ: ಅಕ್ಕಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ₹50 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯಡ್ರಾಮಿ ಠಾಣೆಯ ಪಿಎಸ್‌ಐ ವಿಶ್ವನಾಥ್ ರೆಡ್ಡಿ ಮುದ್ರಡ್ಡಿ ಮತ್ತು ಪೊಲೀಸ್ ಪೇದೆ ಸಿದ್ದಣ್ಣ ಬಿರಾದರ್ ಬಂಧಿತ ಆರೋಪಿಗಳು. ಅಕ್ಕಿ ವ್ಯಾಪಾರ ಆರಂಭಿಸಲು ಯಡ್ರಾಮಿ ತಾಲೂಕಿನ ಆನಂದ್ ಕುಮಾರ್ ಎಂಬುವವರ ಬಳಿ ₹50 ಸಾವಿರ ಲಂಚ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದರು. “ನಾವು ಬಡವರು ಸರ್” ಎಂದು ಮನವಿ ಮಾಡಿಕೊಂಡರೂ ಕೇಳದ ಪಿಎಸ್‌ಐ, ಹಣ ನೀಡಿದರೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಎಂದು ಖಡಕ್ ಸೂಚನೆ ನೀಡಿದ್ದ ಎನ್ನಲಾಗಿದೆ.
ಇದರ ಭಾಗವಾಗಿ ಮೊದಲ ಕಂತಿನ ₹20 ಸಾವಿರವನ್ನು ಫೋನ್‌ಪೇ ಮೂಲಕ ಪಡೆದುಕೊಂಡಿದ್ದ ಆರೋಪಿಗಳು, ಉಳಿದ ₹30 ಸಾವಿರ ನೀಡುವಂತೆ ನಿರಂತರ ಒತ್ತಡ ಹೇರಿದ್ದರು. ಲಂಚ ನೀಡಲು ಇಚ್ಛಿಸದ ಆನಂದ್ ಕುಮಾರ್ ಅವರು ಕಲಬುರಗಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರಿಂದ ಮತ್ತೊಂದು ಕಂತಿನ ₹20 ಸಾವಿರ ನಗದು ಸ್ವೀಕರಿಸುತ್ತಿದ್ದ ವೇಳೆ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ನನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್‌ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಅರುಣ್ ಕುಮಾರ್ ಮುರುಗುಂಡಿ ನೇತೃತ್ವದ ತಂಡ ಯಶಸ್ವಿಯಾಗಿ ದಾಳಿ ನಡೆಸಿದೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
