ಬೆಂಗಳೂರು: ಕಾಡುಗೋಡಿಯ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮೃತ ಬಾಲಕಿಯ ತಾಯಿ ಪ್ರಿಯಾಂಕಾ ವಿರುದ್ಧದ ಅನುಮಾನಗಳು ಇನ್ನಷ್ಟು ಗಾಢವಾಗಿವೆ. ಪ್ರಕರಣದ ಸತ್ಯಾಸತ್ಯತೆ ಹೊರತೆಗೆದುಬರುವ ಉದ್ದೇಶದಿಂದ ಪ್ರಿಯಾಂಕಾಗೆ ಪಾಲಿಗ್ರಾಫ್ (ಸುಳ್ಳುಪತ್ತೆ) ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ. ಇದೇ ವೇಳೆ, ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪ್ರಕರಣದ ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕಾರನ್ನು ಬಾಣಸವಾಡಿ ಎಸಿಪಿ ಅನುಷಾ ನೇತೃತ್ವದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತು. ತನಿಖೆಯನ್ನು ಮುಂದುವರಿಸಲು ಹಾಗೂ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸ್ ಕಸ್ಟಡಿ ಅಗತ್ಯವಿದೆ ಎಂದು ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಗಣಿಸಿದ ಒಂದನೇ ಎಸಿಜೆಎಂ ನ್ಯಾಯಾಲಯ, ಆರೋಪಿ ಮೋಹನ್ಗೆ ಐದು ದಿನ ಹಾಗೂ ಪ್ರಿಯಾಂಕಾಗೆ ಹತ್ತು ದಿನಗಳ ಪೊಲೀಸ್ ಕಸ್ಟಡಿ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಈಗಾಗಲೇ ತನಿಖೆ ವೇಳೆ ಆರೋಪಿ ಮೋಹನ್ ಕೊಲೆ ಕೃತ್ಯದ ಕುರಿತು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 24ರಂದು ಇಂದಿರಾನಗರದಲ್ಲಿ ಶಾಪಿಂಗ್ಗೆ ತೆರಳಿದ್ದ ವೇಳೆ ಐಸ್ಕ್ರೀಮ್ ವಿಚಾರವಾಗಿ ಬಾಲಕಿ ಅಳುತ್ತಿದ್ದ ಕಾರಣ ಕೋಪಗೊಂಡು ಆಕೆಯ ಹೊಟ್ಟೆಗೆ ಒದ್ದು, ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಆದರೆ ಸಹಆರೋಪಿ ಪ್ರಿಯಾಂಕಾ ಮಾತ್ರ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ತನ್ನ ಮಗಳ ಕೊಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾಳೆ. ತನ್ನ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿರುವ ಆಕೆಯ ಹೇಳಿಕೆಯಲ್ಲಿ ವ್ಯತ್ಯಾಸಗಳಿರುವ ಶಂಕೆಯಿಂದ ಪೊಲೀಸರು ವೈಜ್ಞಾನಿಕ ತನಿಖೆಯ ಮೊರೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಪರೀಕ್ಷೆಗೆ ಆಕೆ ಸಮ್ಮತಿ ನೀಡಿರುವುದಾಗಿ ತಿಳಿದುಬಂದಿದ್ದು, ಇದಕ್ಕಾಗಿ ಅಗತ್ಯ ಕಾನೂನು ಹಾಗೂ ನ್ಯಾಯಾಲಯದ ಅನುಮತಿ ಪಡೆಯುವ ಪ್ರಕ್ರಿಯೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಪ್ರಕರಣದ ತನಿಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
