ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಗ್ಲಾಮರಸ್ ನಟಿ ಶರ್ಮಿಳಾ ಮಾಂಡ್ರೆ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ತಮಿಳುನಾಡಿನ ಸೊಸೆಯಾಗಲಿದ್ದಾರೆ.

ಮೂಲಗಳ ಪ್ರಕಾರ, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥವು ಜೂನ್ 25ರಂದು ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ.

ಶರ್ಮಿಳಾ ಅವರು ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಸುಧನ್ ಸುಂದರಂ ಅವರನ್ನು ವಿವಾಹವಾಗಲಿದ್ದಾರೆ. ಸುಧನ್ ಅವರು ಸೂಪರ್ ಹಿಟ್ ಚಿತ್ರ ‘ಮಹಾರಾಜ’ದ ನಿರ್ಮಾಪಕರಾಗಿದ್ದು, ಆ ಸಿನಿಮಾ ಭಾರೀ ಯಶಸ್ಸು ಕಂಡಿತ್ತು.

ಅದರ ಜೊತೆಗೆ, ಇತ್ತೀಚೆಗೆ ಯಶಸ್ಸು ಗಳಿಸಿದ ತಮಿಳು ಚಿತ್ರ ‘ತಾಕ್ ಕಿಳವಿ’ಯ ನಿರ್ಮಾಣದಲ್ಲೂ ಅವರು ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೂನ್ 25ರಂದು ಇವರ ನಿಶ್ಚಿತಾರ್ಥ ನಡೆಯಲಿದ್ದು, ಇದೇ ವರ್ಷ ಮದುವೆಯೂ ನೆರವೇರುವ ಸಾಧ್ಯತೆ ಇದೆ.

ಸುಧನ್ ಸುಂದರಂ ಅವರು ‘ಪ್ಯಾಷನ್ ಸ್ಟುಡಿಯೋಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದು, ಚಿತ್ರ ನಿರ್ಮಾಣ ಹಾಗೂ ವಿತರಣಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

2007ರಲ್ಲಿ ಬಿಡುಗಡೆಯಾದ ‘ಸಜನಿ’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಶರ್ಮಿಳಾ ಮಾಂಡ್ರೆ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಪ್ರಸ್ತುತ ಅವರು ತಮಿಳಿನ ‘ಅದೃಷ್ಟಶಾಲಿ’ ಹಾಗೂ ಕನ್ನಡದ ‘ದಸರಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ನಟಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ, ತಮಿಳಿನಲ್ಲಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಕನ್ನಡದ ‘ದಸರಾ’ ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದು, ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ.

Share.
Leave A Reply

Exit mobile version