ಬೆಂಗಳೂರು: ಕಾನೂನು ರಕ್ಷಕರೇ ಭಕ್ಷಕರಾದಂತೆ ತೋರುವ ಗಂಭೀರ ಘಟನೆಯೊಂದು ನಗರವನ್ನು ಕದಡಿದೆ. ಅಕ್ರಮ ಮನಿ ಟ್ರೇಡಿಂಗ್ ಆರೋಪದ ಹೆಸರಿನಲ್ಲಿ ಕೇರಳ ಮೂಲದ ಇಬ್ಬರನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಮಡಿವಾಳದ ಖಾಸಗಿ ಹೋಟೆಲ್ ಬಳಿ ತಡರಾತ್ರಿ ನಡೆದ ಈ ಘಟನೆ, ಪೊಲೀಸ್ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುವಂತಾಗಿದೆ. ಪೊಲೀಸ್ ಜೀಪ್‌ನಲ್ಲಿ ಬಂದ ಆರೋಪಿಗಳು, ಪೊಲೀಸ್ ಐಡಿ ಕಾರ್ಡ್ ತೋರಿಸಿ ತಾವು ಅಧಿಕೃತ ಅಧಿಕಾರಿಗಳೆಂದು ಭಯ ಹುಟ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ “ಯಾಕೆ ಇಷ್ಟು ಹಣ ತಂದಿದ್ದೀರಾ?” ಎಂದು ಬೆದರಿಸಿ 20 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕೃತ್ಯದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೂಚನೆಯ ಮೇರೆಗೆ ಉಪೇಂದ್ರ ಮತ್ತು ಕುಮಾರ್ ಎಂಬ ಇಬ್ಬರು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಬಳಿಕ ವಂಚನೆಗೊಳಗಾದವರು ಮಡಿವಾಳ ಠಾಣೆಗೆ ದೂರು ನೀಡಿದ್ದು, ಪ್ರಕರಣ ತಕ್ಷಣ ದಾಖಲಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಸಲ್ಮಾನ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಪೊಲೀಸರು ಬಳಸಿದ್ದ ವಾಹನ ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ದೂರುದಾರರ ಹಿನ್ನೆಲೆ, ಹಣದ ಮೂಲ ಹಾಗೂ ಸಂಪೂರ್ಣ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಿಂದ ಪೊಲೀಸ್ ಇಲಾಖೆಯ ಒಳಗಿನ ಶಿಸ್ತು ಮತ್ತು ನೈತಿಕತೆಯ ಮೇಲೆಯೇ ಗಂಭೀರ ಚರ್ಚೆ ಆರಂಭವಾಗಿದೆ.
