ಶಿಮ್ಲಾ: ಶಾಲೆಯಲ್ಲಿ ಊಟ ಸೇವಿಸಿದ ಬಳಿಕ ಸುಮಾರು 40 ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ. ಬ್ಯಾರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ಅಸ್ವಸ್ಥತೆಗೆ ಕಲುಷಿತ ನೀರು ಕಾರಣವಾಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಊಟ ಮಾಡಿದ ಬಳಿಕ ವಿದ್ಯಾರ್ಥಿಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಪಟ್ಲಿಕುಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಏಳು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಲ್ಲು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13 ಮಕ್ಕಳಿಗೆ ಮುಂದುವರಿದ ಚಿಕಿತ್ಸೆ
ಮುಖ್ಯ ವೈದ್ಯಾಧಿಕಾರಿ ಡಾ. ರಂಜೀತ್ ಠಾಕೂರ್ ನೀಡಿದ ಮಾಹಿತಿ ಪ್ರಕಾರ, ಒಟ್ಟು ಅಸ್ವಸ್ಥಗೊಂಡ ಮಕ್ಕಳ ಪೈಕಿ ಪ್ರಸ್ತುತ ಸುಮಾರು 13 ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಏಳು ಮಕ್ಕಳನ್ನು ಕುಲ್ಲುವಿನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಸುಮಾರು 20 ಮಕ್ಕಳನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬುಧವಾರ ಮಕ್ಕಳ ತಜ್ಞರು ಹಾಗೂ ಇತರ ವೈದ್ಯರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಡಾ. ರಂಜೀತ್ ಠಾಕೂರ್, ಅಸ್ವಸ್ಥ ಮಕ್ಕಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯ ಶಾಸಕ ಭುವನೇಶ್ವರ ಗೌರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿದರು.
ಪ್ರಕರಣದ ತನಿಖೆಗೆ ಸಮಿತಿ ರಚನೆ
ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮನಾಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಜಲಶಕ್ತಿ ಇಲಾಖೆಯ ಅಧಿಕಾರಿಗಳು ಶಾಲೆಗೆ ನೀರು ಪೂರೈಕೆಯಾಗುವ ಮೂಲದಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಕಲುಷಿತಗೊಂಡಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ವಿದ್ಯಾರ್ಥಿಗಳು ಸೇವಿಸಿದ ಆಹಾರದಿಂದಲೇ ಸಮಸ್ಯೆ ಉಂಟಾಗಿದೆಯೇ ಅಥವಾ ನೀರಿನ ಮಾಲಿನ್ಯವೇ ಕಾರಣವೇ ಎಂಬುದು ಪರೀಕ್ಷಾ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.
ಗುಜರಾತ್‌ನಲ್ಲೂ ನಡೆದಿತ್ತು ಇದೇ ರೀತಿಯ ಘಟನೆ
ಇದೇ ರೀತಿಯ ಮತ್ತೊಂದು ಘಟನೆ ಕಳೆದ ತಿಂಗಳು ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ನಡೆದಿತ್ತು. ಅಲ್ಲಿನ ಸರ್ಕಾರಿ ವಸತಿ ಶಾಲೆಯ ಕನಿಷ್ಠ 147 ವಿದ್ಯಾರ್ಥಿನಿಯರು ಶಂಕಿತ ಆಹಾರ ವಿಷ ಸೇವನೆಯಿಂದ ಅಸ್ವಸ್ಥಗೊಂಡಿದ್ದರು.
ಅಸ್ವಸ್ಥ ವಿದ್ಯಾರ್ಥಿನಿಯರಲ್ಲಿ ಕೆಲವರಿಗೆ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೆಲವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇತರರನ್ನು ಸುರೇಂದ್ರನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಘಟನೆಯ ನಂತರ ವಿದ್ಯಾರ್ಥಿನಿಯರು ಸೇವಿಸಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿ ಅಗತ್ಯ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.
