ಮುಂಬೈ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ನಟ ರಣವೀರ್ ಸಿಂಗ್ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಚಿತ್ರರಂಗದ ಕೆಲವರು ಪಾಕಿಸ್ತಾನ ಪರ ಮನೋಭಾವ ಹೊಂದಿದ್ದು, ದೇಶಪ್ರೇಮದ ಸಿನಿಮಾಗಳನ್ನು ಮಾಡುವವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಡಾನ್ 3’ ಚಿತ್ರದ ವಿವಾದದ ನಡುವೆ ರಣವೀರ್ ಸಿಂಗ್ ವಿರುದ್ಧ ಎಫ್ಡಬ್ಲ್ಯುಐಸಿಇ ಅಸಹಕಾರದ ನಿರ್ದೇಶನ ಹೊರಡಿಸಿದ್ದ ಹಿನ್ನೆಲೆ, ಅವರ ಪರವಾಗಿ ಮಾತನಾಡಿದ ಕಂಗನಾ, ಬಾಲಿವುಡ್ನ ಒಂದು ವರ್ಗ ದಶಕಗಳಿಂದ ಪಾಕಿಸ್ತಾನದ ಬಗ್ಗೆ ಮೃದು ಧೋರಣೆಯ ಚಿತ್ರಣ ಕಟ್ಟಿಕೊಂಡು ಬಂದಿದೆ ಎಂದು ಟೀಕಿಸಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಭಯೋತ್ಪಾದಕ ಜಾಲದ ವಿರುದ್ಧದ ಕಥಾಹಂದರ ಹೊಂದಿದ್ದ ‘ಧುರಂಧರ್’ ಚಿತ್ರದ ಯಶಸ್ಸಿನ ಬಳಿಕವೇ ರಣವೀರ್ ಸಿಂಗ್ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶಭಕ್ತಿಯ ಕಥಾಹಂದರ ಹೊಂದಿರುವ ಸಿನಿಮಾಗಳು ಯಶಸ್ವಿಯಾಗುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ಇಂತಹ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.
