ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ರಾಜ್ಯದಲ್ಲಿ ರೌಡಿಗಳ ಹಾವಳಿಗೆ ಕಡಿವಾಣ ಹಾಕಲು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ್ಯಂಟಿ-ರೌಡಿ ಸ್ಕ್ವಾಡ್ ರಚಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ ಇದೇ ವೇಳೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ದಾಖಲೆ ನಿರ್ವಹಣೆಯ ಲೋಪದಿಂದ 66 ಕುಖ್ಯಾತ ರೌಡಿಶೀಟರ್‌ಗಳ ಹೆಸರುಗಳು ರೌಡಿಪಟ್ಟಿಯಿಂದ ಕೈಬಿಡಲ್ಪಟ್ಟಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಹೈಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಅನುಸರಿಸದ ಹಿನ್ನೆಲೆಯಲ್ಲಿ ಸೈಲೆಂಟ್ ಸುನಿಲ್, ಒಂಟೆ ರೋಹಿತ್ ಸೇರಿದಂತೆ ಒಟ್ಟು 66 ರೌಡಿಗಳ ವಿರುದ್ಧದ ರೌಡಿಶೀಟ್‌ಗಳನ್ನು ರದ್ದುಪಡಿಸುವಂತೆ ಪೊಲೀಸ್ ದೂರು ಪ್ರಾಧಿಕಾರ ಆದೇಶಿಸಿದೆ. ರೌಡಿಶೀಟ್ ಮುಂದುವರಿಸಲು ಅಗತ್ಯ ದಾಖಲೆಗಳು ಹಾಗೂ ಸಮರ್ಥನೆಗಳನ್ನು ಪೊಲೀಸರು ಸಲ್ಲಿಸಲು ವಿಫಲವಾಗಿರುವುದೇ ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
2022ರಲ್ಲಿ ಹೈಕೋರ್ಟ್ ರೌಡಿಶೀಟ್ ತೆರೆಯುವ ಹಾಗೂ ಮುಂದುವರಿಸುವ ಪ್ರಕ್ರಿಯೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಯಾವುದೇ ವ್ಯಕ್ತಿಯನ್ನು ರೌಡಿಪಟ್ಟಿಗೆ ಸೇರಿಸುವ ಮುನ್ನ ಆತನ ಅಪರಾಧ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ರೌಡಿಶೀಟ್ ತೆರೆಯುವ ಕುರಿತು ಸಂಬಂಧಪಟ್ಟ ವ್ಯಕ್ತಿಗೆ ಮಾಹಿತಿ ನೀಡುವುದು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸುವುದು ಮತ್ತು ಎಲ್ಲಾ ಪ್ರಕ್ರಿಯೆಗಳನ್ನು ದಾಖಲಾತಿಗಳ ಮೂಲಕ ಸಮರ್ಥಿಸುವುದು ಕಡ್ಡಾಯವಾಗಿದೆ.
ಇದೇ ರೀತಿ ರೌಡಿಪಟ್ಟಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲನೆ ನಡೆಸಬೇಕು. ಒಂದು ವರ್ಷದ ಬಳಿಕ ಸಂಬಂಧಪಟ್ಟ ವ್ಯಕ್ತಿ ತನ್ನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಮನವಿ ಸಲ್ಲಿಸಬಹುದಾಗಿದೆ. ಪೊಲೀಸರು ಅಂತಹ ಮನವಿಗಳ ಬಗ್ಗೆ 60 ದಿನಗಳೊಳಗೆ ನಿರ್ಧಾರ ಕೈಗೊಳ್ಳಬೇಕು. ಮನವಿ ತಿರಸ್ಕೃತವಾದರೆ, ಸಂಬಂಧಪಟ್ಟ ವ್ಯಕ್ತಿಗೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಪ್ರಾಧಿಕಾರವು 60 ದಿನಗಳೊಳಗೆ ಅಂತಿಮ ತೀರ್ಮಾನ ನೀಡಬೇಕಾಗಿದೆ.
ಆದರೆ ಈ ನಿಯಮಾವಳಿಗಳನ್ನು ಹಲವು ಪ್ರಕರಣಗಳಲ್ಲಿ ಸಮರ್ಪಕವಾಗಿ ಅನುಸರಿಸದಿರುವುದರಿಂದ 66 ರೌಡಿಶೀಟರ್‌ಗಳಿಗೆ ರೌಡಿಪಟ್ಟಿಯಿಂದ ಮುಕ್ತಿ ದೊರೆತಿದೆ ಎಂದು ತಿಳಿದುಬಂದಿದೆ.
