ವಾಲ್ಮೀಕಿ ನಿಗಮ ಹಗರಣದ ಆರೋಪಗಳ ನಡುವೆ ನಾಗೇಂದ್ರ ಆಕ್ರೋಶ | “ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ” | “ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ

ಬೆಂಗಳೂರು (ಆ.19): ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ, ಮೂರು ದಿನಗಳ ಬಳಿಕ ಸಚಿವ ಬಿ. ನಾಗೇಂದ್ರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಲ ದಾಖಲೆಗಳೊಂದಿಗೆ ಸುದ್ದಿಗೋಷ್ಠಿಗೆ ಆಗಮಿಸಿದ ನಾಗೇಂದ್ರ, ನನ್ನ ರಾಜೀನಾಮೆ ಕೇಳುವ ಮುನ್ನ ನಿಮ್ಮ ನಾಯಕರ ರಾಜೀನಾಮೆ ಕೇಳಿ ಎಂದು ವಿಪಕ್ಷಗಳಿಗೆ ಸವಾಲ್ ಹಾಕಿದ್ದಾರೆ.

ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಾಲ್ಮೀಕಿ ನಿಗಮದಿಂದ ₹187 ಕೋಟಿ ವರ್ಗಾವಣೆಯಾಗಿದ್ದರೂ ಅದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಗಮನಕ್ಕೆ ಬಂದ ಬಳಿಕ ₹100 ಕೋಟಿಯನ್ನು ಫ್ರೀಜ್ ಮಾಡಿಸಲಾಗಿತ್ತು ಎಂದಿದ್ದಾರೆ.

ತನಿಖೆಗೆ ಅಡ್ಡಿಯಾಗಬಾರದೆಂದು ನಾನೇ ರಾಜೀನಾಮೆ ಕೊಟ್ಟೆ

SIT ತನಿಖೆ ಆರಂಭವಾದ ಸಂದರ್ಭದಲ್ಲಿ ತಾವು ಸಚಿವರಾಗಿದ್ದರೆ ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೆ ಎಂದು ನಾಗೇಂದ್ರ ಹೇಳಿದ್ದಾರೆ. SIT ತನಿಖೆಯಲ್ಲಿ ಸುಮಾರು ₹79 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ ಎಂದಿದ್ದಾರೆ.

ದಲಿತ ಅಂತ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ

ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಒತ್ತಡದ ಹಿಂದೆ ಜಾತಿಯ ಕಾರಣವಿದೆ ಎಂದು ಆರೋಪಿಸಿದ ನಾಗೇಂದ್ರ, ದಲಿತ ಮತ್ತೊಮ್ಮೆ ಮಂತ್ರಿಯಾಗಿದ್ದಾನೆ, ಅವನನ್ನು ಕೆಳಗಿಳಿಸಬೇಕೆಂದು ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂವಿಧಾನದ ಪುಸ್ತಕ ಪ್ರದರ್ಶಿಸಿದ ಅವರು, ಸಂವಿಧಾನ ನಮ್ಮನ್ನು ಕಾಪಾಡುತ್ತಿದೆ. ನಾನು ಹುಟ್ಟು ದಲಿತ, ಸಾಯೋದು ಸಹ ದಲಿತನಾಗಿಯೇ ಎಂದು ಭಾವುಕವಾಗಿ ಹೇಳಿದ್ದಾರೆ.

ನನ್ನದು ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ನಾಗೇಂದ್ರ, ನಾನು ಅಪರಾಧಿಯಲ್ಲ. ನನ್ನದು ತಪ್ಪಾಗಿದೆ ಎಂದು ಸಾಬೀತಾದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕರ ವಿರುದ್ಧವೂ ಪ್ರಕರಣಗಳಿವೆ ಎಂದು ಪ್ರಸ್ತಾಪಿಸಿದ ಅವರು, ನನ್ನ ರಾಜೀನಾಮೆ ಕೇಳುವ ಮೊದಲು ನಿಮ್ಮ ನಾಯಕರ ರಾಜೀನಾಮೆ ಪಡೆಯಿರಿ ಎಂದು ತಿರುಗೇಟು ನೀಡಿದ್ದಾರೆ.

ಕೊನೆಯಲ್ಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ, ನೀವು ಬನ್ನಿ ಎಂದು ವಿಪಕ್ಷಗಳಿಗೆ ನೇರ ಸವಾಲ್ ಹಾಕಿರುವ ಸಚಿವ ನಾಗೇಂದ್ರ ಅವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ

 

Share.
Leave A Reply

Exit mobile version