ಬೆಂಗಳೂರು: ಪಡಿತರ ಅಕ್ಕಿ ಹಾಗೂ ಆಹಾರ ಧಾನ್ಯ ವಿತರಣೆಯಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಬೆಂಗಳೂರಿನ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿ ಒಟ್ಟು 27 ಆಹಾರ ನಿಗಮದ ಗೋದಾಮುಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಹಲವು ಗೋದಾಮುಗಳಲ್ಲಿ ದಾಖಲೆಗಳು ಮತ್ತು ನೈಜ ದಾಸ್ತಾನು ನಡುವೆ ಗಂಭೀರ ವ್ಯತ್ಯಾಸಗಳು ಪತ್ತೆಯಾಗಿವೆ. ಶಾಂತಿನಗರ ಗೋದಾಮಿನಲ್ಲಿ ಸುಮಾರು 1,130 ಅಕ್ಕಿ ಮೂಟೆಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದಾರೆ.

ಬೊಬ್ಬನಹಳ್ಳಿ ಗೋದಾಮಿನಲ್ಲಿ ಸುಮಾರು 25 ಟನ್ ಅಕ್ಕಿಯನ್ನು ಲಾರಿಗೆ ಲೋಡ್ ಮಾಡುತ್ತಿರುವುದು ಪತ್ತೆಯಾಗಿದ್ದು, ಅಕ್ರಮ ಸಾಗಣೆ ಶಂಕೆ ವ್ಯಕ್ತವಾಗಿದೆ. ಬಸವನಗುಡಿ ಗೋದಾಮಿನಲ್ಲಿ ದಾಖಲೆ ಮತ್ತು ದಾಸ್ತಾನು ನಡುವೆ ಹೊಂದಾಣಿಕೆ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಹನುಮಂತನಗರ ಗೋದಾಮಿನಲ್ಲಿ ದಾಖಲೆಗಳಲ್ಲಿ ಉಲ್ಲೇಖಿಸಿದಷ್ಟು ಅಕ್ಕಿ ಮತ್ತು ರಾಗಿ ದಾಸ್ತಾನು ಲಭ್ಯವಿಲ್ಲದಿರುವುದು ಪತ್ತೆಯಾಗಿದೆ. ಹಲವು ಗೋದಾಮುಗಳಲ್ಲಿ ಹಮಾಲಿ ಕಾರ್ಮಿಕರಿಗೆ ಜೀವ ವಿಮೆ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡದೇ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿರುವ ಆರೋಪವೂ ಕೇಳಿಬಂದಿದೆ.

ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರಿಸಿದ್ದು, ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗುವ ಸಾಧ್ಯತೆ ಇದೆ.

 

Share.
Leave A Reply

Exit mobile version