ಬೆಂಗಳೂರು, ಜೂನ್‌ 4: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅಗತ್ಯ ನೆರವು ಒದಗಿಸಲು ರಾಜ್ಯದಾದ್ಯಂತ ಹೆಲ್ಪ್‌ ಡೆಸ್ಕ್‌ಗಳನ್ನು ಸ್ಥಾಪಿಸುವಂತೆ ಅವರು ಆದೇಶಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಜನಸ್ನೇಹಿ ರೀತಿಯಲ್ಲಿ ನಡೆಯಬೇಕು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈತಪ್ಪದಂತೆ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಎಸ್‌ಐಆರ್ ಸಂಬಂಧಿತ ಪ್ರಶ್ನೆಗಳು ಹಾಗೂ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಗತ್ಯವಿರುವ ಸ್ಥಳಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯುವಂತೆ ಅವರು ತಿಳಿಸಿದರು. ಜೊತೆಗೆ ಈ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಲು ಸೂಚಿಸಿದರು.

ಜಿಲ್ಲಾವಾರು ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗಿದ್ದು, ಮತದಾರರಲ್ಲಿ ಅರಿವು ಮೂಡಿಸಲು ಪ್ರತ್ಯೇಕ ಜಾಗೃತಿ ತಂಡವನ್ನೂ ರಚಿಸಲಾಗುವುದು ಎಂದು ತಿಳಿಸಿದರು.

ಇತರ ಕೆಲವು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ. ಆದರೆ ಕೇರಳದಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಗೊಂಡಿರುವುದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲೂ ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ತ್ವರಿತ ಪರಿಹಾರ ನೀಡಲು ಹೊಸ ಇಲಾಖೆಯೊಂದನ್ನು ಸ್ಥಾಪಿಸುವ ಪ್ರಸ್ತಾವವನ್ನೂ ಮುಖ್ಯಮಂತ್ರಿ ಮುಂದಿಟ್ಟಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಸಚಿವರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

ಎಸ್‌ಐಆರ್ ಎಂದರೇನು?

ಎಸ್‌ಐಆರ್ (Special Intensive Revision) ಅಥವಾ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಚುನಾವಣಾ ಆಯೋಗದ ಮಹತ್ವದ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಮರಣ ಹೊಂದಿದವರ ದಾಖಲೆಗಳು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ನೋಂದಾಯಿತ ಹೆಸರುಗಳನ್ನು ಗುರುತಿಸಿ ಸರಿಪಡಿಸುವ ಉದ್ದೇಶ ಹೊಂದಿದೆ.

ಎಸ್‌ಐಆರ್ ಕುರಿತು ಕಾಂಗ್ರೆಸ್ ಆಕ್ಷೇಪ ಏನು?

ಎಸ್‌ಐಆರ್ ಪ್ರಕ್ರಿಯೆಯ ಕೆಲವು ನಿಯಮಗಳ ಕುರಿತು ಕಾಂಗ್ರೆಸ್ ಪಕ್ಷ ಆರಂಭದಿಂದಲೇ ಆತಂಕ ವ್ಯಕ್ತಪಡಿಸುತ್ತಿದೆ. ತಾಂತ್ರಿಕ ಪರಿಷ್ಕರಣೆಯ ಹೆಸರಿನಲ್ಲಿ ಬಡವರು, ವಲಸೆ ಕಾರ್ಮಿಕರು ಹಾಗೂ ಕೆಲವು ಸಮುದಾಯಗಳ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಪಕ್ಷ ಆರೋಪಿಸಿದೆ. ಪರಿಶೀಲನೆ ಪ್ರಕ್ರಿಯೆಯಲ್ಲಿ ಲೋಪ ಉಂಟಾದರೆ ನಿಜವಾದ ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕೆ ಸರ್ಕಾರವು ಈ ವಿಷಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲು ಮುಂದಾಗಿದೆ.

Share.
Leave A Reply

Exit mobile version