ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ (73) ನಿಧನರಾಗಿದ್ದಾರೆ. ಮಲ್ಟಿಪಲ್ ಮೈಲೋಮಾ (ರಕ್ತದ ಕ್ಯಾನ್ಸರ್) ಹಾಗೂ ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಅವರು ಕಳೆದ ಎರಡು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಒಡೆಯರ್ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಪವನ್ ಒಡೆಯರ್ ಅವರ ಕುಟುಂಬಕ್ಕೆ ಭರಿಸಲಾಗದ ದುಃಖ ಎದುರಾಗಿದೆ. ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಗೀತಾ ಒಡೆಯರ್ ಬಳಲುತ್ತಿದ್ದರು. ಇಂದು (ಜೂನ್ 17) ಬೆಂಗಳೂರಿನಲ್ಲಿ ಗೀತಾ ಒಡೆಯರ್ ಕೊನೆಯುಸಿರೆಳೆದಿದ್ದಾರೆ. ಗೀತಾ ಒಡೆಯರ್ ಅವರಿಗೆ 73 ವರ್ಷ ವಯಸ್ಸಾಗಿತ್ತು.
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೀತಾ ಒಡೆಯರ್
ಮೂಲಗಳ ಪ್ರಕಾರ, ಗೀತಾ ಒಡೆಯರ್ ಮಲ್ಟಿಪಲ್ ಮೈಲೋಮಾ (Multiple Myeloma) ಎಂಬ ಒಂದು ರೀತಿಯ ರಕ್ತದ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ (Guillain-Barré Syndrome) ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪವನ್ ಒಡೆಯರ್ ಅವರು ಬೆಂಗಳೂರಿನಲ್ಲಿಯೇ ತಾಯಿಯನ್ನು ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ವೈದ್ಯಕೀಯ ಪ್ರಯತ್ನಗಳು ಫಲಿಸದೇ ಗೀತಾ ಒಡೆಯರ್ ವಿಧಿವಶರಾಗಿದ್ದಾರೆ.
ಕುಣಿಗಲ್‌ನಲ್ಲಿ ಅಂತ್ಯಕ್ರಿಯೆ
ಗೀತಾ ಒಡೆಯರ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ತುಮಕೂರು ಜಿಲ್ಲೆಯ ಕುಣಿಗಲ್‌ಗೆ ಕೊಂಡೊಯ್ಯಲಾಗಿದೆ. ಇಂದು (ಜೂನ್ 17) ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಪವನ್ ಒಡೆಯರ್ ಹಾಗೂ ಅವರ ಕುಟುಂಬಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
