“ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಬಳಿಕ LNG ಹೊತ್ತು ದಾಹೇಜ್ ತಲುಪಿದ ಮೊದಲ ಭಾರತೀಯ ನೌಕೆ”

ದಾಹೇಜ್ (ಗುಜರಾತ್): ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ಬಳಿಕ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತಕ್ಕೆ ತಲುಪಿದ ಮೊದಲ ಭಾರತೀಯ ವಾಣಿಜ್ಯ ನೌಕೆ ಎಂಬ ಹೆಗ್ಗಳಿಕೆಗೆ ಎಲ್‌ಎನ್‌ಜಿ (LNG) ಟ್ಯಾಂಕರ್ ‘ದಿಶಾ’ ಪಾತ್ರವಾಗಿದೆ. ಕತಾರ್‌ನ ರಾಸ್ ಲಫಾನ್ ಟರ್ಮಿನಲ್‌ನಿಂದ 62,370 ಮೆಟ್ರಿಕ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (LNG) ಹೊತ್ತು ಬಂದ ಈ ಹಡಗು, ಗುಜರಾತ್‌ನ ಭರೂಚ್ ಜಿಲ್ಲೆಯ ದಾಹೇಜ್ ಬಂದರನ್ನು ಯಶಸ್ವಿಯಾಗಿ ತಲುಪಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದ ಹಿನ್ನೆಲೆ, ಕಳೆದ ಮೂರು ತಿಂಗಳಿನಿಂದ ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದ ‘ದಿಶಾ’ ನೌಕೆಯ ಸುರಕ್ಷಿತ ಆಗಮನವು ಭಾರತದ ಇಂಧನ ವಲಯಕ್ಕೆ ಮಹತ್ವದ ನೆಮ್ಮದಿ ನೀಡಿದೆ. ಜಾಗತಿಕ ಇಂಧನ ಸಾಗಣೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಈಗ ಮತ್ತೆ ಸಾಮಾನ್ಯ ಸ್ಥಿತಿ ಮರುಕಳಿಸುತ್ತಿರುವುದಕ್ಕೆ ಈ ಪ್ರಯಾಣ ಸಾಕ್ಷಿಯಾಗಿದೆ.

ಈ ನೌಕೆಯನ್ನು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟ ಹಾಗೂ ಪೆಟ್ರೋನೆಟ್ ಎಲ್‌ಎನ್‌ಜಿ ನಿರ್ವಹಿಸುತ್ತಿವೆ. ಹಡಗು ದಾಹೇಜ್ ಬಂದರು ತಲುಪುತ್ತಿದ್ದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು.

ತಜ್ಞರ ಪ್ರಕಾರ, ‘ದಿಶಾ’ ನೌಕೆಯ ಯಶಸ್ವಿ ಸಂಚಾರವು ಕೇವಲ ಒಂದು ಹಡಗಿನ ಪ್ರಯಾಣವಲ್ಲ; ಇದು ಭಾರತದ ಇಂಧನ ಭದ್ರತೆ, ಕಡಲ ವ್ಯಾಪಾರ ಹಾಗೂ ಜಾಗತಿಕ ಸರಕು ಸಾಗಣೆ ಕ್ಷೇತ್ರಕ್ಕೆ ಹೊಸ ವಿಶ್ವಾಸ ತುಂಬಿದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ವಾಣಿಜ್ಯ ನೌಕೆಗಳು ಇದೇ ಮಾರ್ಗದಲ್ಲಿ ನಿರಾತಂಕವಾಗಿ ಸಂಚರಿಸುವ ನಿರೀಕ್ಷೆ ವ್ಯಕ್ತವಾಗಿದೆ.

Share.
Leave A Reply

Exit mobile version