ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿ, ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಕಡಗವನ್ನು ಕಾಣಿಕೆಯಾಗಿ ಅರ್ಪಿಸಿ ಭಕ್ತಿಭಾವವನ್ನು ವ್ಯಕ್ತಪಡಿಸಿದರು.
ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು, ನಂತರ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ ಬೆಳೆಸಿದರು. ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಸಂಪ್ರದಾಯಕ್ಕೆ ಅನುಗುಣವಾಗಿ ಶರ್ಟ್ ಹಾಗೂ ಬನಿಯನ್ ತೆಗೆದು, ಕೇವಲ ಲುಂಗಿ ಮತ್ತು ಶಲ್ಯ ಧರಿಸಿ ದೇವಿಯ ದರ್ಶನ ಪಡೆದರು. ಅವರು ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿ ಸುಮಾರು 20 ನಿಮಿಷಗಳ ಕಾಲ ದೇವಾಲಯದಲ್ಲಿ ಕಳೆದರು.
ಕೊಲ್ಲೂರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಅವರ ಮಾಹಿತಿ ಪ್ರಕಾರ, ವಿಜಯ್ ಅವರು ದೇವಿಗೆ 1.6 ಕೆಜಿ ತೂಕದ ಬೆಳ್ಳಿ ಕಡಗವನ್ನು ಸಮರ್ಪಿಸಿದ್ದಾರೆ. ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನವು ತಮಿಳುನಾಡು ಹಾಗೂ ಕೇರಳದ ಲಕ್ಷಾಂತರ ಭಕ್ತರ ಆರಾಧ್ಯ ಸ್ಥಳವಾಗಿದ್ದು, ಅನೇಕ ರಾಜಕೀಯ ನಾಯಕರು ಹಾಗೂ ಸಿನಿರಂಗದ ಗಣ್ಯರು ಇಲ್ಲಿ ದರ್ಶನ ಪಡೆಯುವುದು ಸಾಮಾನ್ಯವಾಗಿದೆ.
ಹಿಂದಿನ ಕಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೂಡ ಹಲವಾರು ಬಾರಿ ಈ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದರು. ಎಂಜಿಆರ್ ಅವರು ದೇವಿಗೆ ಒಂದು ಕೆಜಿ ತೂಕದ ಚಿನ್ನದ ಖಡ್ಗವನ್ನು ಸಮರ್ಪಿಸಿದ್ದರೆ, ಜಯಲಲಿತಾ ಅವರು ವಿಶೇಷ ಪೂಜೆಗಳ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದರು ಎಂಬುದು ತಿಳಿದುಬರುತ್ತದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ಒಂದು ತಿಂಗಳಲ್ಲೇ ಜೋಸೆಫ್ ವಿಜಯ್ ಅವರ ದಿಢೀರ್ ಕೊಲ್ಲೂರು ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಚುನಾವಣೆಗೆ ಮುನ್ನ ವಿಜಯ್ ಅವರ ಪೋಷಕರು ಮೂಕಾಂಬಿಕೆ ದೇವಿಯ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದು, ಅದು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಜಯ್ ಅವರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಸಿಎಂ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭದ್ರತಾ ಕಾರಣಗಳಿಂದ ಮಧ್ಯಾಹ್ನದಿಂದ ಸಂಜೆವರೆಗೆ ಸಾಮಾನ್ಯ ಭಕ್ತರ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಪೂಜೆ ಮುಗಿಸಿದ ಬಳಿಕ ವಿಜಯ್ ಅವರು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಮರಳಿದರು.
